ಜುಮ್ಮಿ ಮರ -
ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಬೆಳೆಯುವ ಒಂದು ಕಾಡುಮರ. ರೂಟೇಸೀ ಕುಟುಂಬಕ್ಕೆ ಸೇರಿದೆ. ಗಾಮಟೆ, ಅರಮಾದಳ ಪರ್ಯಾಯ ನಾಮಗಳು. ಕ್ಸಾಂತೊಕ್ಸೈಲಮ್ ರೆಟ್ಸ ಇದರ ವೈಜ್ಞಾನಿಕ ಹೆಸರು. ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

	ಇದು ದೊಡ್ಡ ಗಾತ್ರದ ಪರ್ಣಪಾತಿಮರ. ಬಿರಟೆಯಂಥ ಕೆನೆಬಣ್ಣದ ತೊಗಟೆಯುಂಟು. ಚೌಬೀನೆಯ ಬಣ್ಣ ಹಳದಿಮಿಶ್ರಿತ ಬೂದು. ತಕ್ಕಮಟ್ಟಿಗೆ ಗಡುಸು. ಎಲೆಗಳು ಪಿಚ್ಛಕೆ ಮಾದರಿಯವು; ಪರ್ಯಾಯ ಬಗೆಯಲ್ಲಿ ಜೋಡಣೆಗೊಂಡಿವೆ. ಪ್ರತಿ ಎಲೆಯಲ್ಲೂ 8-20 ಜೊತೆ ಕಿರು ಎಲೆಗಳಿವೆ. ಕಿರುಎಲೆಗಳ ಅಂಚು ನಯ. ಎಲೆಗಳ ಬುಡದಲ್ಲಿ ಶಂಕುವಿನಾಕಾರದ ಮುಳ್ಳುಗಳುಂಟು. ಇವೇ ವೃಂತಪರ್ಣಗಳು. ಎಲೆಯ ಅಲಗಿನಲ್ಲಿ ಪಾರದರ್ಶಕ ಚುಕ್ಕೆಗಳಿವೆ. ಇವು ತೈಲಗ್ರಂಥಿಗಳು. ತೈಲಕ್ಕೆ ಒಂದು ಘಾಟುವಾಸನೆ ಮತ್ತು ರುಚಿ ಇದೆ. ಹೂಗಳು ಸಣ್ಣವು. ಹಳದಿ ಬಣ್ಣದವು.; ರೆಂಬೆಗಳ ತುದಿಯಲ್ಲಿ ಮಧ್ಯಾರಂಭಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿಯೊಂದು ಹೂವಿನಲ್ಲಿ 4 ಪುಷ್ಟಪತ್ರಗಳು, 4 ದಳಗಳು, 4 ಕೇಸರಗಳು ಹಾಗು 4 ಕಾರ್ಪೆಲುಗಳ ಉಚ್ಚ ಅಂಡಾಶಯ ಇವೆ. ಫಲ ಗುಂಡಗೆ ರಸಭರಿತವಾಗಿದೆ. ಎಳೆಯದಿದ್ದಾಗ ಇದಕ್ಕೆ ಕಿತ್ತಳೆಹಣ್ಣಿನ ಸಿಪ್ಪೆಯ ವಾಸನೆಯುಂಟು. ಬೀಜಕ್ಕೆ ಕಾಳುಮೆಣಸಿನ ರುಚಿ ಇದೆ.

ಕಾಯಿಗಳನ್ನು ಉಪ್ಪಿನಕಾಯಿ ಹಾಕಲು ಬಳಸುವುದುಂಟು. ಕಾಯಿಗೆ ಉತ್ತೇಜಕ, ಪ್ರತಿಬಂಧಕ, ಪಾಚಕ ಗುಣಗಳಿವೆ, ಅದನ್ನು ಮೂತ್ರಸಂಬಂಧದ ಕಾಯಿಲೆಗಳಲ್ಲೂ ಕೃಷ್ಣಪಿತ್ತದಿಂದ ಉಂಟಾಗುವ ಅಜೀರ್ಣ ರೋಗದಲ್ಲೂ ಬಳಸುತ್ತಾರೆ. ಅಲ್ಲದೆ ಓಮ ಕಾಳಿನೊಂದಿಗೆ ಕಾಯನ್ನು ಕುಟ್ಟಿ ಪುಡಿಮಾಡಿ, ನೀರಲ್ಲಿ ನೆನೆಯಿಟ್ಟು ಬಟ್ಟೆಯಿಳಿಸಿ ಉಳಿಯುವ ಬಟ್ಟಿಯನ್ನು ಕಾಲರ ಚಿಕಿತ್ಸೆಯಲ್ಲಿ ಉಪಯೋಗಿಸುವರು. ತೊಗಟೆ ವಾಜೀಕರ ಎಂದು ಹೇಳಲಾಗಿದೆ.

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ